ಕುಂದಾಪುರ, ಫೆಬ್ರವರಿ ೪: ಎಲ್ಲರೂ ಒಂದೇ ಧರ್ಮ ಒಪ್ಪಿಕೊಂಡಾಗ ಹಿಂಸೆ ಹಿಂದಕ್ಕೆ ಸರಿಯುತ್ತದೆ. ಛಿದ್ರಾನ್ವೇಷಣೆ ಮಾಡಿ ನಡೆದುಹೋದ ತಪ್ಪು ಒಪ್ಪಿಕೊಂಡು ಮತ್ತೆ ಹಿಂಸೆ ಮರುಕಳಿಸದಂತೆ ತ್ಯಜಿಸದಿದ್ದರೆ ದೇಶ ಛಿದ್ರ ಛಿದ್ರವಾಗಲಿದೆ ಎಂದು ಖ್ಯಾತ ಚಿಂತಕ ರಂಗ ನಿರ್ದೇಶಕ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಕುಂದಾಪುರ ಜೂನಿಯರ್ ಕಾಲೇಜು ರೋಟರಿ ಲಕ್ಷ್ಮಿನರಸಿಂಹ ಕಲಾ ಮಂದಿರದಲ್ಲಿ ’ಸಹಮತ’ ಮತ್ತು ’ಬದುಕು ಬಳಗ’ ಆಶ್ರಯದಲ್ಲಿ ನಡೆದ ’ಗಾಂಧಿ ಸ್ಮೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮನ್ನು ನಾವು ಪರಾಮರ್ಶಿಸಿ ಕೊಂಡಾಗ ಪರಿವರ್ತನೆ ಸಾಧ್ಯ ಎಂದರು.
೧೯೯೨ರಲ್ಲಿ ಎರಡು ಅವಗಢ ನಡೆಯಿತು. ಒಂದು ಬಾಬರಿ ಮಸೀದಿ ನೆಲಸಮವಾದರೆ ಅಂದಿನ ಪ್ರಧಾನಿ ನರಸಿಂಹ ರಾವ್ ಜಾಗತೀಕರಣ ಜಾರಿಗೆ ತರುವ ಮೂಲಕ ಮತ್ತೊಂದು ಅನಾಹುತ ಸೃಷ್ಟಿಸಿದರು. ಇದರಿಂದಾಗಿ ಜನರಲ್ಲಿ ಕೊಳ್ಳುಬಾಕತನ ಹುಟ್ಟಿಕೊಂಡಿದೆ. ದುಡ್ಡಿನ ದ್ವಂದ್ವ ಅಶಾಂತಿಗೆ ಕಾರಣವಾಗಿದೆ ಎಂದು ವಿಶ್ಲೇಶಿಸಿದರು.
ಗೋಡ್ಸೆ ಹುತಾತ್ಮನಾಗುವ ಮತ್ತು ಬಹುಸಂಖ್ಯಾತ ಹಿಂದುಗಳಲ್ಲಿ ಶಾಸ್ವತ ನೆಲೆ ನಿಲ್ಲುವ ಮಹತ್ವಾಕಾಂಕ್ಷೆಯಿಂದ ಗಾಂಧಿಜೀ ಅವರನ್ನು ಕೊಂದ. ಆದರೆ ಇಂದು ಆರ್‌ಎಸ್ಸೆಸ್ ಆಗಲಿ ಬಿಜೆಪಿಯವರಲಾಗಲೀ ಗೋಡ್ಸೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಗೋಡ್ಸೆಯನ್ನು ಒಪ್ಪಿಕೊಂಡು ಚುನಾವಣೆ ಎದುರಿಸುವ ಧೈರ್ಯವೂ ಇಲ್ಲ. ರಾಜಕೀಯ ನಾಯಕರು ನಡೆದ ಹಿಂಸೆಗೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಹಿಂಸೆ ಒಪ್ಪಿಕೊಳ್ಳುತ್ತಿಲ್ಲ. ಹಿಂಸೆ ಒಪ್ಪಿಕೊಂಡಾಗ ಮಾತ್ರ ಅಹಿಂಸೆ ವಿಜೃಂಭಿಸುತ್ತದೆ ಎಂದರು.
ಗಾಂಧಿ ಹುತಾತ್ಮ ದಿನವನ್ನು ಗೋಡ್ಸೆ ಜಯಂತಿಯನ್ನಾಗಿ ಆಚರಿಸಬೇಕು. ಗೋಡ್ಸೆ ಹಿಂಸೆ ಪ್ರತಿ ಪಾದಕನಾಗಿ ಕಾಣುವುದರಿಂದ ಸದಾ ಜಾಗೃತಾವಸ್ಥೆಯಲ್ಲಿರಲು ಸಾಧ್ಯ. ಬಡವರನ್ನು ಜತಗೆ ತೆಗೆದುಕೊಂಡು ಹಿಂಸೆಯನ್ನು ಹಿಮ್ಮೆಟ್ಟುವ ಕೆಲಸ ಸಮಾಜದಲ್ಲಿ ಆಗಬೇಕು. ಮುಸ್ಲಿಂ ಸಮುದಾಯದಲ್ಲೂ ಹೆಚ್ಚಿನ ಬದಲಾವಣೆಯಾಗಿಲ್ಲ. ಮುಸ್ಲಿಂ ಸಮಾಜವನ್ನು ತಿದ್ದುವ ಕೆಲಸ ಆಗಬೇಕಾಗಿದೆ ಎಂದರು.
ಚಿಂತಕ ಮತ್ತು ಕವಿ ವಸಂತ ಬನ್ನಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಮಣಿಪಾಲ ಸಂವಹನ ಸಂಸ್ಥೆ ನಿರ್ದೇಶಕ ವರದೇಶ್ ಹಿರೇಗಂಗೆ ಅಧ್ಯಕ್ಷತೆ ವಹಿಸಿದ್ದರು.
ಸಹಮತ ಮುಖಂಡ ವೆಲೇರಿಯನ್ ಮಿನೇಜಸ್ ಸ್ವಾಗತಿಸಿದರು. ಸಹಮತ ಸ್ಥಾಪಕ ಶಶಿಧರ ಹೆಮ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ್ ವಡೇರ ಹೋಬಳಿ, ಶಿಕ್ಷಕ ಗಣಪತಿ ಹೋಬಳಿದಾರ್ ಮತ್ತು ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾವಡ ಕಾಯಕ್ರಮ ನಿರೂಪಿಸಿದರು. ಸಹಮತದ ಮುಖಂಡ ವಿನೋದ್ ಕ್ರಾಸ್ತಾ ವಂದಿಸಿದರು. ಕಾರ್ಯಕ್ರಮದ ನಂತರ ಖ್ಯಾತ ಹಿಂದೂಸ್ಥಾನಿ ಗಾಯಕ ಶಿವಮೊಗ್ಗದ ಹುಮಾಯೂನ್ ಹರ್ಲಾಪುರ ಅವರಿಂದ ಗಾಯನ ನಡೆಯಿತು.
ಪ್ರಸನ್ನ ಹೇಳಿದ್ದು :
*ಆರ್‌ಎಸ್ಸೆಸ್ ಕೂಡಾ ಗೋಡ್ಸೆ ನೆನಪು ಮಾಡಿಕೊಳ್ಳುತ್ತಿಲ್ಲ.
*ಬಿ.ಎಸ್. ಯಡಿಯೂರಪ್ಪ ಮತ್ತು ನರೇಂದ್ರ ಮೋದಿಗೆ ಗೋಡ್ಸೆ ಬೇಕಾಗಿಲ್ಲ.
*ಮಹಾತ್ಮರಿಗೆ ವಂದಿಸಿ, ರಾಜಕೀಯ ವ್ಯಕ್ತಿಯನ್ನು ಕೊಂದೆ ಎಂದು ಗೊಡ್ಸೆ ಹೇಳಿಕೊಂಡಿದ್ದಾನೆ.
*ಹಿಂಸೆಯನ್ನು ಒಪ್ಪಿಕೊಂಡಾಗ ಅಹಿಂಸೆ ಉಳಿಯುತ್ತದೆ.
*ಆರ್‌ಎಸ್ಸೆಸ್‌ಗೆ ತಿರುಮಂತ್ರ ತಿದ್ದಲು ಅಂತಾದ್ದೇ ಮುಸ್ಲಿಂ ಸಂಘಟನೆ ಹುಟ್ಟಿಕೊಂಡಿದೆ.
*ಮುಸ್ಲಿಂ ಸಂಘಟನೆಯ ಅಝೆಂಡಾ ಒಳಗೊಂದು ಹೊರಗೊಂದು. ಮುಸ್ಲಿಂ ಸಂಘಟನೆಯ ಒಳ ಅಝಂಡಾ ಆರ್‌ಎಸ್ಸೆಸ್‌ನಂತೆ ನಿಗೂಢ.
*ನಕ್ಸಲರೂ ಬಡವರ ಪರ ಅಂತ ಹಿಂಸೆ ಮಾಡುತ್ತಾರೆ ಅದನ್ನು ಅವರು ಒಪ್ಪಿಕೊಳ್ಳುವುದಿಲ್ಲ.
*ಹಿಂಸೆ ಸ್ಥಾಯಿಯಾಗಿದೆ, ಅಹಿಂಸೆ ಸಭೆಗಳಲ್ಲಿ ಮಾತ್ರ ಕಾಣುತ್ತಿದೆ.
*ಶಿಕ್ಷಕರು ಗಾಂಧಿ, ಅಂಬೇಡ್ಕರ್ ಪಾಠಮಾಡುವ ಬದಲು ವಿದ್ಯಾರ್ಥಿಗಳಿಗೆ ಓದಿಕೊಳ್ಳಿ ಎಂದು ಸಲಹೆ ಮಾಡುತ್ತಾರೆ.